Sunday, April 22, 2012

ಕಸದ ತೊಟ್ಟಿ ಗಾಥೆ

ಇದು 2008 ನಲ್ಲಾದ ಕಥೆ. ನಾನು ನನ್ನ ಪ್ರಥಮ ಆನ್‌ಸೈಟ್ ಮುಗಿಸಿ ಇಂಡಿಯಾಕ್ಕೆ ವಾಪಸ್ ಬಂದಾಗ ಬೆಂಗಳೂರಿನಲ್ಲಿ ನನ್ನ ಯಾರೂ  ಕ್ಯಾರೇ ಮಾಡ್ಲಿಲ್ಲ. ಆದರೆ ನಮ್ಮೊರ್ ಬ್ಯಾಡ್ಗಿ ವಿಷಯ ಹಾಗಿರ್‍ಲಿಲ್ಲ. ಅಲ್ಲಿ ಹೋದಾಗ ಏನೋ ಯುದ್ಧದಲ್ಲಿ ಗೆದ್ದುಬಂದ ಸೈನಿಕನಂತೆ ನನ್ನ ಸ್ವಾಗತ ಮಾಡಲಾಯಿತು. ಇಂಥ ಮೆಟ್ರೋ ಯುಗದಲ್ಲಿ ನಮ್ಮೂರು ಒಂದು ಹಳ್ಳಿಯಂದರೆ ತಪ್ಪಾಗಲಾರದು. ಜನ ನನ್ನ 'ಇವ್ನೇನಾ ಅಮೆರಿಕೆಯಿಂದ ಬಂದಿದ್ದು' ಎಂದು ದಂಗಾಗಿ ನೋಡ್ತಿದ್ರು. ನಮ್ಮ ಪಕ್ಕದ್ಮನೆ ಆಂಟೀ, "ಅಯ್ಯೋ ಪಾಪ ಮಗು ಬ್ರೆಡ್ಡು, ಪಿಜ್ಜ ತಿಂದು ಬಡಕಲು ಆಗಿದಾನೆ ನೋಡಿ" ಅಂತ ಕನಿಕರ ಪಟ್ರು.

 "ಇಲ್ಲ ಆಂಟೀ, ನಾನು ಟೆನ್ನಿಸ್ ಆಡ್ತೀನಿ, ಅದ್ಕೆ ಫಿಟ್ ಕಾಣಸ್ತೀನಿ" ಅಂದೆ.

'ಟೆನ್ನಿಸ್ಸ? ಅದೇನ್ ಆಟ ಅದು?"

"ಅದು.. ಬ್ಯಾಡ್‌ಮಿಂಟನ್ ತರ ಒಂದು ಆಟ ಆಂಟೀ" ಎಂದು ಅರ್ಥ  ಮಾಡಿಸಲು ಪ್ರಯತ್ನಿಸಿದ್ದೆ.

ನನ್ನ ಕಸಿನ್ ಶಾಹಿದ್  ಅಂತೂ ಫುಲ್ ಕಾಲರ್ ಟೈಟ್. ಮರುದಿನ ನನ್ನ ಒಂದು ಕಟಿಂಗ್ ಅಂಗಡಿಗೆ ಕರದೌದ.
"ಮ್ಯಲೆಳಲೇ ಬೋಸುಡೀಕೆ ಇಲ್ಲಿ ಯಾರ್ ಬಂದಾರ್ ನೋಡ್" ಎಂದು ಒಂದು ಕುರ್ಚಿ ಖಾಲಿ ಮಾಡಿಸಿ, "ನಮ್ಮಣ್ಣ ಅಮೇರಿಕದಿಂದ ಬಂದಾನರೀ"  ಎಂದು ಹೊಗಳಿದ. ತಕ್ಷಣ ಅಲ್ಲಿ ಹಜಾಮ ಕೈಯಲ್ಲಿ ಕತ್ರಿ  ಹಿಡ್ಕೊಂಡು ಒಬ್ಬ  ಏಲೀಯನ್ ಕಂಡೊ ಹಾಗೆ ದುರುಗುಟ್ಟಿ ನನ್ನ ನೋಡಿದ.

"ನಿಮಗ್ ಕನ್ನಡ ಬರ್‍ತೈತರಿ?" ಎಂದು ಆತುರದಿಂದ ಕೇಳಿದ.

"ನಾನ್ ಇಲ್ಲೇ ಹುಟ್ಟಿ  ಬೆಳ್ದೌನರೀ. ಅಲ್ಲಿ ಬರಿ ವಂದೂವರೆ ವರ್ಷ ಕೆಲ್ಸಕ್ಕೆ ಹೋಗಿದ್ದೆ"  ಅಂತ ಹೇಳ್ದೆ.

"ಅಲ್ರೀ ಅಲ್ಲಿ ಕಟಿಂಗ್ಗೆ ಎಷ್ಟ್ ರೊಕ್ಕಾ?"  ಅಂತ ಅವ್ನು ಕೇಳ್ದಾಗ  ಶಾಹಿದ್ ಇರಿಟೈಟ್ ಆಗಿ,

"ತಮ್ಮ ಅಲ್ಲಿ ರೊಕ್ಕಾ ತಗೊಂಡ್ ಎನ್ ಮಾಡ್ತೀ? ಅಲ್ಲಿ ರೊಕ್ಕಾ ಅಲ್ಲ ಡಾಲರ್ ಅಂತಾರ. ಒಂದ್   ಡಾಲರ್ ಗೆ ಒಂದ್ ಸಾವಿರ್ ರೂಪಾಯೀ ಗೊತ್ತೇನ್? ಮೊದ್ಲು ಎರಡ್ ಕೇ ಟೀ ತರಸ್ .. ಬರಿ ಹಾಲ್ ಇರ್ಬೇಕ್ ನೋಡ್ ಅದರಾಗ " ಅಂತ ಆಜ್ಞೆ ಕೊಟ್ಟ.

ಆ ಕಟಿಂಗ್ ಅಂಗಡಿ ಪಕ್ಕನೆ ನನ್ನ ಇನ್ನೊಬ್ಬ  ಕಸಿನ್ ಶೇರ್ ಅಲಿ ಸ್ಟೇಶನರಿ ಅಂಗಡಿ ಇತ್ತು. ನಾನೇನೋ ಯುಎಸ್ನಲ್ಲಿ ಇದ್ದಿದ್ದು  ಒಂದೂವರೆ ವರ್ಷ ಮಾತ್ರ ಆದ್ರೆ ಏನೋ ಅಲ್ಲಿ ಸಿಟಿಜೆನ್  ತರ ವರ್ತಿಸಲು ಶುರು ಮಾಡಿದ್ದೆ. ಜನ್ರಿಗೆ ಕ್ಲೀನಾಗಿ, ನೀಟಗಿರಲು ಉಪ್‌ದೇಶ ಕೊಡ್ತಾ ಇದ್ದೇ. ಜನ ಏನೋ ನನ್ನ ಎಲ್ಲಿಂದಲೋ ಸಿದ್ಧಿ ಪಡೆದುಕೊಂಡು ಬಂದ  ಸ್ವಾಮಿನ ಕೇಳೋ ಹಾಗೆ ಕೇಳ್ತಾ ಇದ್ರು. ನನ್ನ ಕಸಿನ್ ಅಂಗಡಿಗೆ ಹೋದಾಗ ನನಗೆ ಅಸಹ್ಯ ಅನ್ಸಿತ್ತು. ಅಂಗಡಿಯ ವರಾಂಡದಲ್ಲಿ ಕಸ , ಅಂಗಡಿ ಮುಂದೆ ಸಿಗರೇಟ್, ಗುಟಖ  ಚೀಟಿಗಳು ರಾರಾಜಿಸುತಿದ್ವು

"ಯಾಹಾಂ ಟ್ರಾಶ್ ಬಿನ್  ಯ  ಡಸ್ಟ್ ಬಿನ್ ನ್ನೈ ಹೈಕ್ಯಾ" ಅಂತ ಅವನ್ನಾ ಕೇಳ್ದೆ

ಅವ್ನು ಬಾಯಲ್ಲಿ ಗುಟಖ ತಿನ್ತಾ ಕಷ್ಟಪಟ್ಟು ಬಾಯಿ ತೆಗೆದು ," ಉಸ್ಕಿ ಜ಼ರೂರತ್ ನಕ್ಕೋ. ಪೂರಾ ಗಾಂವ್ ಐಸೆ ಹಿಚ್  ಗಲೀಜ್ ಹೈ" ಅಂತ ಗುಡುಗ್ದ. ನಾನು ತಕ್ಷಣ  ಶಾಹಿದ್ ನ  ಕರ್ಕೊಂಡು ಒಂದು ಡಸ್ಟ್ ಬಿನ್ ಅಥವ  ಕಸದ ತೊಟ್ಟಿ ತರಲು ಹೊರಟೆ.

"ಪ್ಲಾಸ್ಟಿಕ್ ನಕ್ಕೋ. 2 ಮಿನಿಟ್ಮೆ ಚೋರಿ ಹೋತಾ ದೇಖ್. ಪೂರಾ ಗಾಂವ್ ಮೆ ಸಭ್ ಚೋರಾ ಹೈಂ" ಅಂತ ಶಾಹಿದ್ ಸಲಹೆ  ಕೊಟ್ಟ. ತುಂಬಾ ಯೋಚ್ನೆ ಮಾಡಿ ಒಂದು 3 X 3 ಫೂಟ್ cylindrical ಚಿಕ್ಕ ಸೆಮೆಂಟ್ ಟ್ಯಾಂಕ್ ನ ಖರೀದಿ ಮಾಡೋಕ್ಕೆ ಡಿಸೈಡ್  ಮಾಡ್ದೆ. ಟ್ಯಾಂಕ್ ಖರೀದಿಸಿ ಅಂಗಡಿಯವನಿಗೆ ಹಣ  ಕೊಟ್ಟು 'ಥ್ಯಾಂಕ್ ಯೂ' ಅಂತ ಹೇಳ್ದೆ.

"ಥ್ಯಾಂಕ್ ಯೂ ಯಾಕ್ ಹೇಳ್ತಿ? ರೊಕ್ಕಾ ಕೊಟ್ಟೀಲ್ ಎನ್ ಆ ಸೂಲೆಮಗಂಗೆ" ಅಂತ ಶಾಹಿದ್ ಗುನುಗುಟ್ಟಿದ.

ಅವ್ನ್ ಮಾತಿದೆ ಕಿವಿಗೊಡದೆ ಆ ಟ್ಯಾಂಕ್ ತೆಗೆದುಕೊಂಡು ಬಂದು ನನ್ನ ಕಸಿನ್ ಗೆ ಹೇಳ್ದೆ "ತೆರೆ ಲಿಯೇ ಏಕ್ ಗಿಫ್ಟ್ ಹೈ"
ಶೇರ್ ಅಲಿ ಗೆ ಅವ್ನ್ ಜೀವನ್ದಲ್ಲೇ ಯಾರೂ  ಇನ್ನುವರೆಗೂ ಗಿಫ್ಟ್ ಕೊಟ್ಟಿರ್ಲಿಲ್ಲ. ಗಿಫ್ಟ್ ವಿಷ್ಯ ಕೇಳಿ ಅವ್ನು ಹೌಹಾರಿದ. ನಾನು ಮತ್ತು ಶಾಹಿದ್ ಸೇರಿ ಆ ಸೆಮೆಂಟ್  ಟ್ಯಾಂಕ್ ನ ಅವ್ನ್ ಅಂಗಡಿ ಮುಂದೆ ಇಟ್ವಿ. ಎಲ್ರೂ ಅದನ್ನ ಒಂದು UFO ತರ ನೋಡ್ಲಿಕ್ಕೆ ಶುರು ಮಾಡಿದ್ರು. ಯಾರೂ ಅದ್ರಲ್ಲಿ ಕಸ ಎಸೆಯೋಕೆ ರೆಡೀನೆ ಇರ್ಲಿಲ್ಲ. ನಾನೇ ಕೊನೆಗೆ ಶಾಹಿದ್ ಗೆ  ಅದ್ರಲ್ಲಿ ಉಗಿಯೋಕೆ ಹೇಳ್ದೆ. ಅವ್ನು ಕಣ್ಣು ಮುಚ್ಚಿ ಉಗ್ದ. ಅಷ್ರಲ್ಲಿ ಅಲ್ಲೇ ಹೋಗ್ತಿದ್ದ ಓಬ್ಬ ಅಜ್ಜಿ ಬಂದು,
"ಅಯ್ಯೋ ನಿನ್ನ ಮನಿ ಹಾಳಾಗ. ಇಂಥ ಹೊಸ ನೀರಿನ್ ಟ್ಯಾಂಕ್ ನ್ಯಾಗ  ಉಗಿತೀಯಲ್ಲ ನಾಚಿಕೆಯಾಗಲ್ಲ ನಿಂಗ?" ಅಂತ ಚೀರಿದ್ಲು.

"ಇಲ್ಲ ಅಜ್ಜಿ ಅದು ಕಸದ ತೊಟ್ಟಿ. ಉಗಿಯೋಕ್ಕೆ, ಕಸಾ ಹಾಕೋಕ್ಕೆನೇ ಇರೋದು" ಅಂತ ಅಜ್ಜಿಗೆ ಎಕ್ಸ್‌ಪ್ಲೇನ್ ಮಾಡ್ದೇ.

"ಅಯ್ಯೋ ನಿನಗೆನ್ ತಲಿ ಕೆಟ್ಟೈತೆನ್ ತಮ್ಮ. ಇಂಥ ಹೊಸ ನೀರಿನ ಟ್ಯಾಂಕ್ ನ್ಯಾಗ ಕಸಾ ಯಾರ್ ಹಾಕ್ತಾರ ತಮ್ಮ" ಅಂತ ಹೊಣಗುತ್ತಾ ಹೋದ್ಲು.

ಒಂದೆರಡು ದಿನ ಜನರಿಗೆ ಅದನ್ನ use ಮಾಡೋದಕ್ಕೆ ಆ ಏರಿಯಾ ಸ್ವಚ್ಚವಾಗಿಡೋದಕ್ಕೆ ತುಂಬಾ ಉಪದೇಶ ಕೊಟ್ಟೆ. ಆದ್ರೂ ಜನ ಅದ್ರಲ್ಲಿ ಕಸಾ ಹಾಕೋಕ್ಕೆ ಹಿಂಜರೀತ ಇದ್ರು. ಆ ಏರಿಯ ದಲ್ಲೇ ಸ್ವಲ್ಪ ಓದ್ದೌನು ಅಂದ್ರೆ ಬಾಷಾ. ಒಂದಿನ ಅವ್ನು ಅಲ್ಲಿ ಬಂದು "ಭಯ್ಯ ಕಸದ ತೊಟ್ಟಿ ಅಂತ ಯಾರ್ಗೂ ಗೊತ್ತಾಗ್ತಾ ಇಲ್ಲ. ಅದರ ಮೇಲೆ 'USE ME ' ಅಂತ ಬರಿಯೋಣ' ಅಂತ ಹೇಳ್ದ
ಅಲ್ಲೇ ಪಕ್ಕ ಇದ್ದ ಶಾಹಿದ್ 'ನಕ್ಕೋ ಬೇ, ಇಲ್ಲಿ ಯಾವ್ ಸೂಳೆಮಗಂಗೂ ಇಂಗ್ಲಿಷ್ ಬರೋದಿಲ್ಲ. ಅದ್ಕ ಅದರ ಮ್ಯಾಲೆ 'ನಿಮ್ದ್ ಕಸ ಇಲ್ಲಿ ಹಾಕಿ' ಅಂತ ಬರ್ಸೋಣ' ಅಂತ ನಡಕ್ಕೆ ಬಾಯಿ ಹಾಕ್ದ. ಅದರ ಬಗ್ಗೆ ತುಂಬಾ ಚರ್ಚೆ ಆಗಿ ಕೊನೆಗೂ ಯಾವ್ ಲಿಪಿಯೂ finalize ಆಗ್ಲಿಲ್ಲ.

ಮನೇಲಿ ನಮ್ಮಣ್ಣ ನನಗೆ ದುಡ್ಡು ಜಾಸ್ತಿ ಆಗಿದೆಯ ಇಂಥ ಕೆಲ್ಸಯಾಕೆ ಮಾಡ್ತೀಯಾ ಅಂತ ಸರಿಯಾಗಿ ಬಯ್ದ. ನಾನೇನ್ ಅವ್ನಿಗೆ ಉತ್ತರ ಕೊಡ್ಲಿಲ್ಲ.

ಆಮೇಲೆ ನಾನ್ ಕೆಲಸಕ್ಕೋಸ್ಕರ  ಬೆಂಗಳೂರಿಗೆ ಬಂದೆ. ಆದ್ರೆ ನಂಗೆ ಯಾವಾಗ್ಲೂ ಆ ಕಸದ ತೊಟ್ಟಿ ಚಿಂತೆ.
ಒಂದು ವಾರ ಆದ ಮೇಲೆ  ಶಾಹಿದ್ ಫೋನ್ ಮಾಡ್ದ, "ಮೊನ್ನೇ ರಾತ್ರಿ ಆ ತೊಟ್ಟಿ ಕಳು ಆಗಿತ್ತು. ಹುಡುಕ್ದಾಗ  ಅದು ಗುಳೆದೊರ ಮಾದ್ಯಾನ್  ಮನ್ಯಾಗ ಸಿಗ್ತು. ಅವ್ನಿಗೆ ಸರಿಯಾಗಿ ಬಾರಿಸಿ ವಾಪಸ್ ತಂದ ಇಟ್ಟೆವಿ" ಅಂತ ಅವನ ಸಾಹಸ ಗಾಥೆ ಹೇಳ್ಕೊಂಡ.

ನಂಗೇನೂ ತೊಟ್ಟಿ ವಾಪಸ್ ಸಿಕ್ಕಿದ್ದಕ್ಕೆ ಸಮಾಧಾನವಾಯ್ತು. ನಾನು ಊರಿಗೆ ಫೋನ್  ಮಾಡ್ದಾಗ್ಲೆಲ್ಲ ಎಲ್ರೂ ಅದರ  ಕಥೆನೇ ಹೇಳ್ತಿದ್ರು. ಆ ಕಸದ ತೊಟ್ಟಿ ವಿಷ್ಯ ಇಡೀ ಊರಿಗೆಲ್ಲ ಗೊತ್ತಾಗಿ ಹೋಗಿತ್ತು. ಜನ ದೂರ್ ದೂರದಿಂದ ಬಂದು ಅದನ್ನೇ  ದುರುಗುಟ್ಟಿ ನೋಡ್ತಿ ದ್ರಂತೆ. ಒಂದು ದಿನ ಓ ಬ್ಬ ಮುನ್ಸಿಪಾಲಿಟಿ ವಿಧಾಯಕ ಬಂದು ಅದರ ಬಗ್ಗೆ ನನ್ನ ಕಸಿನ್ ಜೋತೆ ಇಂಟರ್‌ವ್ಯೂ ಕೂಡ  ಮಾಡಿದ್ನಂತೆ. ಕೆಲವೇ ದಿನಗಳಲ್ಲ್ಲಿ ಆ ಜಾಗ  ಒಂದು ಪ್ರವಾಸಿ ತಾಣ  ಆಗಿ ಹೋಗಿತ್ತು.  ಕೆಲವು ಜನ ನನ್ನ ಈ ಕೆಲ್ಸಕ್ಕೆ ಹೊಗಳಿದ್ರೆ ಇನ್ನು  ಕೆಲವು ಜನ ನಂಗೆ ತಲೆ ಏನೋ ಕೆಟ್ಟಿರ್ಬೌದು  ಎಂದೂ  ಇನ್ನು ಕೆಲವರು  ಮುಂದೆ  ನಾನು ಎಲೆಕ್ಷನ್  ನಿಂತು  ವೋಟು  ಸಂಪಾದಸ್ಗೊಸ್ಕರ  ಮಾಡ್ತೀರೋ publicity ಗಿಮ್ಮಿಕ್ ಎಂದೂ ಘೋಷಿಸ್ಬಿಟ್ರು ಎಂದು ಶಾಹಿದ್  ಫೋನ್ ಅಲ್ಲಿ ಹೇಳ್ತಾ ಇದ್ದ. ಆದ್ರೆ ನಂಗೇನೂ ಒಂಥರಾ ಅಭಿಮಾನವೆ ಆಯಿತು ಹೊರತು ಜನರ ಯಾವ   ಮಾತಿನ  ಪ್ರಭಾವ  ಆಗ್ಲಿಲ್ಲ. ಇಡೀ ಊರನ್ನೇ ಆ ತರ ತೊಟ್ಟಿಗಳನ್   ಉಪ್ಯೋಗಿಸೋ ತರ ಮಾಡ್ಬೇಕು ಅಂತ ನನ್   ಆಸೆ ಇನ್ನೊ ಧೃಡವಾಯ್ತು.

ಎರಡು ತಿಂಗಳು ನಂತರ ನಂಗೆ ರಜೆ ಸಿಕ್ತು. ರಾಣಿ ಚೆನ್ನಮ್ಮ ಟ್ರೈನ್ ಹತ್ತಿ ಊರಿಗೆ ಹೊರಟೆ. ಟ್ರೈನ್ ಲ್ಲಿ ಎಲ್ಲ ಆ ಕಸದ ತೊಟ್ಟಿದೆ ವಿಚಾರ. ಊರಲ್ಲಿ ಇಳಿದ ತಕ್ಷಣ ನನ್ನ ಕಸಿನ್ ಅಂಗಡಿಗೆ ಹೋದೆ. ಅಲ್ಲಿ ಹೋಗಿ ನೋಡಿದಾಗ  ನನಗೆ  ಅಲ್ಲಿ ಶಾಕ್  ಕಾದಿತ್ತು. ತೊಟ್ಟಿನೇ ಇರ್ಲಿಲ್ಲ. ಅದೇ ಸಿಗರೆಟ್ , ಗುಟಖ ಚೀಟಿ ಚೆಲ್ಲಪಿಲ್ಲಿ ಆಗಿ ಬಿದ್ದಿದ್ದು  ನೋಡಿ ನಂಗೆ ಎಲ್ಲಿಲ್ಲದ  ನೀರಾಸೆ ಆಯ್ತು. ಹೋಗಿ ಶೇರ್  ಅಲಿ ನ  ಕೇಳ್ದೆ.

"ತುಮಕೋ ಕ್ಯಾ ಬತಾವೂನ್ .. ಏಕ್ ದಿನ್ ರೋಡ್ ರಿಪೇರ್ ಕೋ bulldozer ಆಯಾ. ಉಸ್ಕಾ ಬ್ಲೇಡ್ ತೊಟ್ಟಿ ಕೋ ಲಗ್ ಕೆ  ವೋ ಪೀಸ್ ಪೀಸೆ ಹೊ ಗಾಯ. ಹಂ ಸಬಕೋ ಬಹುತ್  ಬೇಜಾರ್ ಹುವಾ" ಅಂತ ಅವ್ನು ಹೇಳ್ದಾಗ ದಳದಳ  ಅಂತ ನನ್ ಕಣ್ಣಲ್ಲಿ ನೀರು ಬಂದಿದ್ದು ನನಗೇನೆ ಗೊತ್ತಾಗ್ಲಿಲ್ಲ. ಆ ತೊಟ್ಟಿ ಮುರಿದಾಗ  ಊರಿನ ಜನ ಬಂದು ನೋಡಿ ಶೊಕಾಚರಣೆ ಮಾಡಿದ್ರೂ ಅಂತ ಅವ್ನು ಹೇಳ್ದ.  ಶಾಹಿದ್ ಅಂತೂ ಆ ಬುಲ್ಡೋಸರ್ ಡ್ರೈವರ್ ಗೆ ಒಂದೆರಡು ಸರಿಯಾಗಿ ಬಿಟ್ಟಿದ್ನಂತೆ. ಆಮೇಲೆ  ನನ್ನ ಕಸಿನ್ ನನ್ನ ಕೊರ್ಕೊಂಡ , "ಫಿರ್ ಸೆ ಔರ್ ಕೊಇ  ತೊಟ್ಟಿ ಲಾವು ನಕ್ಕೋ. ನಾವು ಮೊದ್ಲು ಹೆಗ್ ಇದ್ವಿ ಅದೇ ತರ ಇರ್ತೇವೀ"

ಈ ವಿಷ್ಯ ಮುಗ್ದು ಈಗ  ೪ ವರ್ಷ ಆಗಿದೆ. ನಾನ್ ಮತ್ತೆ ಅಮೇರಿಕದಲ್ಲಿ ಇದೀನಿ. ಸಧ್ಯದಲ್ಲೇ ರಜೆ ಪಡೆದು ಮತ್ತೆ ಇಂಡಿಯಾ ಹೋಗೋ ಪ್ಲಾನ್  ಮಾಡ್ತಾ ಇದೀನಿ. ನಂಗೇನೂ ನಮ್ಮ  ಊರನ್ನ  ಅಮೆರಿಕ  ತರ ಮಾಡೋಣ ಅಂತ ಆಸೆ. ಆದ್ರೆ ಅಲ್ಲಿ ಜನರಿಗೆ ನನ್ನ ಇನ್ಟೆನ್ಶನ್  ಅರ್ಥ ಆಗೋಲ್ಲ. ಪರ್ವಾಗಿಲ್ಲ ಪ್ರ್ಯತ್ನ ಅಂತೂ ಮಾಡ್ತೀನಿ. ಈ ಸತಿ ಒಂದು ಪಬ್ಲಿಕ್  toilet ಕಟ್ಟೋ  ಐಡಿಯಾ ಇದೆ. ಹೇಗೋ ಶಾಹಿದ್ ಇದಾನಲ್ಲ, ಅವ್ನು ಊರಲ್ಲಿ ಇರೋವರ್ಗೂ ನಂಗೇನ್  ಚಿಂತೆ ಇಲ್ಲ. ನಾನ್  ಅವನಿಗೆ ಫೋನ್ ಮಾದ್ದಾಗ್ಲೆಲ್ಲ  ಆ ತೊಟ್ಟಿನ ಆಗಾಗ  ಇನ್ನೂ ನೆನೆಸ್ಕೊತಿರ್ತಾನೆ. ಏನೇ ಹೇಳಿ ನ್ಯೂ ಯೋರ್ಕ್ , ಚಿಕಾಗೋ, ಅಟ್ಲಾಂಟ ಎಷ್ಟು ಊರು ಸುತ್ತಾಡಿದರೂ ultimately ನಮ್ಮೂರೇ ನನಗ್ ಇಷ್ಟ. ನಿಮಗೂ ತಾನೇ ? :-)